ನಿಗಮನ ಭೋಧನ ವಿಧಾನ -
	ಒಂದು ಸಾಮಾನ್ಯ ಅಥವಾ ಸಾರ್ವತ್ರಿಕ ನಿಯಮವನ್ನು ಆಧಾರಾಂಶವನ್ನಾಗಿಟ್ಟುಕೊಂಡು ಪ್ರತ್ಯೇಕ ಸಂದರ್ಭಗಳಿಗೆ ಅದನ್ನು ಹೊಂದಿಸುವ ಬೋಧನ ಕ್ರಮ.

	ಬೋಧನೆಯಲ್ಲಿ ಈ ವಿಧಾನವನ್ನು ಬಳಸುವಾಗ, ನಿಯಮ ಅಥವಾ ಸಾಮಾನ್ಯೀಕರಣಗಳಿಂದ ಆರಂಭಿಸಿ ವಿಶಿಷ್ಟ ತೀರ್ಮಾನಗಳನ್ನು ರೂಢಿಸುತ್ತೇವೆ. ಕಲಿಕೆಯ ವಸ್ತುವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಬಗ್ಗೆ ತೀರ್ಮಾನಕ್ಕೆ ಬರಲು ವಿದ್ಯಾರ್ಥಿ ದೃಢೀಕರಿಸಿರುವ ಮತ್ತು ಪ್ರಸ್ತುತ ದತ್ತಾಂಶಗಳಿಗೆ ಅನ್ವಯಿಸಬಹುದಾದ ಸಾಮಾನ್ಯ ತತ್ತ್ವಗಳನ್ನು ಬಳಸುತ್ತಾನೆ. ಅವನ ತರ್ಕದ ದಿಕ್ಕು ಸಾಮಾನ್ಯ ಪ್ರಸ್ತಾವನೆಗಳಿಂದ ಪ್ರತ್ಯೇಕ ಸಂದರ್ಭಗಳ ಕಡೆಗಿರುತ್ತದೆ. ಸಾಧಾರಣವಾಗಿ ನಿಗಮನ ವಿಧಾನದಲ್ಲಿ ವಿದ್ಯಾರ್ಥಿ ಅನುಸರಿಸಬಹುದಾದ ಕೆಲವು ನಿರ್ದಿಷ್ಟ ಹಂತಗಳು ಇವು.
ಸಮಸ್ಯೆಯೊಂದನ್ನು ಮಾನಸಿಕವಾಗಿ ಸ್ವೀಕರಿಸಿ ಅರ್ಥಮಾಡುವುದು.

ಈ ಸಮಸ್ಯೆಯ ಬಗ್ಗೆ ತೀರ್ಮಾನಕ್ಕೆ ಬರಲು ಸಹಾಯಕವಾಗುವ ಸಾಮಾನ್ಯ ತತ್ತ್ವ ಅಥವಾ ಪ್ರಮೇಯವನ್ನು ಆಯ್ಕೆ ಮಾಡುವುದು. 
ಪ್ರಮೇಯದ ಆಧಾರದ ಮೇಲೆ ತೀರ್ಮಾನ ಕೈಕೊಳ್ಳುವುದು.

ತನ್ನ ತೀರ್ಮಾನದ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಅಥವಾ ಪ್ರಮಾಣೀಕರಿಸಿ ತನ್ನ ತರ್ಕದ ಸಾಮಂಜಸ್ಯವನ್ನು ದೃಢಪಡಿಸಿಕೊಳ್ಳುವುದು.

ಅಂತಿಮವಾಗಿ ಉಪಾಧ್ಯಾಯರೊಡನೆ ಚರ್ಚಿಸಿ ತರ್ಕದ ನಿಕರತೆಯನ್ನು ಸಾಬೀತು ಮಾಡಿಕೊಳ್ಳುವುದು.

	ಈ ವಿಧಾನದಿಂದ ಬೋಧಿಸುವಾಗ ಉಪಾಧ್ಯಾಯ ವಿಷಯವನ್ನು ಸಮಸ್ಯಾತ್ಮಕ ಮಾಡಲು ವಿಷಯವನ್ನು ಸರಿಯಾಗಿ ವಿಶ್ಲೇಷಿಸಲು ತರ್ಕಸರಣಿ ಸೂಕ್ತಮಾರ್ಗದಲ್ಲಿ ಪ್ರವಹಿಸಲು, ಸ್ವೀಕಾರಕ್ಕೆ ಯೋಗ್ಯವೆನಿಸುವ ವಿವಿಧ ಸಾಧ್ಯತೆಗಳನ್ನು ಪರಿಗಣಿಸಲು, ವಿಷಯಸಂಗ್ರಹಣೆಯ ಮೂಲಗಳನ್ನು ಪತ್ತೆಹಚ್ಚಲು ಮಾರ್ಗದರ್ಶನ ನೀಡುತ್ತಾನೆ.

	ಶಿಕ್ಷಣದಲ್ಲಿನ ಈ ವಿಧಾನ ನಿಗಮನ ತರ್ಕಶಕ್ತಿಗೆ ತರಬೇತಿ ಕೊಡುತ್ತದೆ. ನಿತ್ಯಜೀವನದ ಅನೇಕ ಘಟನೆಗಳನ್ನು ಈ ತರ್ಕದಿಂದ ವಿಶ್ಲೇಷಿಸಬಹುದು. ಈ ತರ್ಕ ದುರುಪಯೋಗವಾದರೆ ದೋಷಪೂರಿತ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ. ನಿಗಮನ ತರ್ಕಕ್ಕೆ ಒಂದು ಸಾಧಾರಣ ನಿದರ್ಶನ ಇದು: ನಗುವುದು ಎಲ್ಲ ಮಾನವರಿಗೂ ಸಹಜ. ಇದು ಸಾರ್ವತ್ರಿಕ ಒಪ್ಪಿಗೆ ಪಡೆದಿರುವ ಒಂದು ಪ್ರಸ್ತಾಪ. ರಾಮ ಒಬ್ಬ ಮಾನವ. ಇದು ಒಂದು ಪ್ರತ್ಯೇಕ ಸಂಗತಿ. ರಾಮ ಎಂಬವ ನಗಬಲ್ಲ. ಇದು ತರ್ಕದಿಂದ ಕೈಕೊಂಡ ತೀರ್ಮಾನ. ತರ್ಕಯೋಚನಾಸಾಮಥ್ರ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅತಿ ಕಠಿಣ. ಗಣಿತ ಶಾಸ್ತ್ರ ಬೋಧನೆಯಲ್ಲಿ ಇದಕ್ಕೆ ಹೆಚ್ಚು ಅವಕಾಶ ದೊರೆಯುತ್ತದೆ. ರೇಖಾಗಣಿತದಲ್ಲಿ ಒಂದು ಪ್ರಮೇಯದ ನಿರೂಪಣೆಯನ್ನು ಪ್ರಸ್ತಾಪಿಸುತ್ತೇವೆ. ಇದನ್ನು ಸಾಧಿಸಲು, ಈ ಮೊದಲೇ ದೃಡೀಕರಿಸಲ್ಪಟ್ಟಿರುವ ದತ್ತಾಂಶಗಳನ್ನು ಸಂಗ್ರಹಿಸಿ ತರ್ಕಮಾಡುತ್ತೇವೆ. ಇತರ ಇಂಥ ಸನ್ನಿವೇಶಗಳಿಗೆ ಈ ತೀರ್ಮಾನವನ್ನು ಅನ್ವಯಿಸುತ್ತೇವೆ. ಇದೇ ನಿಗಮನ ತರ್ಕದ ಪ್ರಕ್ರಿಯೆ.

	ತರ್ಕವನ್ನು ನಿಗಮನ ರೀತಿಯಲ್ಲಿಯೋ ಅನುಗಮನ ರೀತಿಯಲ್ಲಿಯೋ ಮುಂದುವರಿಸಲು ವಿದ್ಯಾರ್ಥಿಗಳಿಗೆಲ್ಲ ವಿಶೇಷ ತರಬೇತಿ ಬೇಕು. ನೂತನ ಹಾಗೂ ಸಮಸ್ಯಾತ್ಮಕ ಸನ್ನಿವೇಶಗಳನ್ನು ಎದುರಿಸುವ ಅವಕಾಶ ಅವರಿಗೆ ದೊರಕಬೇಕು. ನಿಗಮನ ಮತ್ತು ಅನುಗಮನ ತರ್ಕಗಳನ್ನು ಪ್ರತ್ಯೇಕವಾಗಿ ಕೇವಲ ವಿಶ್ಲೇಷಣೆಗೋಸ್ಕರ ಚರ್ಚಿಸಬೇಕು. ನಿತ್ಯಜೀವನದ ಸನ್ನಿವೇಶದಲ್ಲಿ ಈ ಎರಡೂ ವಿಧಾನಗಳ ಸಮ್ಮಿಲನ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

	ನಿಗಮನ ಸಂಶ್ಲೇಷಣಾತ್ಮಕವಾದರೆ ಅನುಗಮನ ವಿಶ್ಲೇಷಣಾತ್ಮಕ. ವಿಶ್ಲೇಷಣೆಗಿಂತ ಸಂಶ್ಲೇಷಣೆ ಸಹಜವಾಗಿಯೇ ಸುಲಭ. ಆದ್ದರಿಂದ ವಿದ್ಯಾರ್ಥಿಗಳು, ಉಪಾಧ್ಯಾಯರು, ನಿಗಮನ ವಿಧಾನದ ಕಡೆಗೆ ಹೆಚ್ಚು ವಾಲುತ್ತಾರೆ. ಅನುಸರಿಸುವ ಮಾರ್ಗಕ್ಕಿಂತ ಅಂತಿಮ ಗುರಿ ಪ್ರಭಾವಯುತವಾದಾಗ ನಿಗಮನ ವಿಧಾನ ಪ್ರಭಾವಕಾರಿಯಾದರೂ ಶೈಕ್ಷಣಿಕ ಮೌಲ್ಯದ ದೃಷ್ಟಿಯಿಂದ ಅನುಗಮನ ವಿಧಾನದೊಂದಿಗೆ ಹೋಲಿಸಿದಾಗ ಉತ್ತಮವೆನಿಸುವುದಿಲ್ಲ. ವೈಜ್ಞಾನಿಕ ಮನೋಭಾವನೆಯ ಬೆಳವಣಿಗೆಗೆ, ಸೃಜನಾತ್ಮಕತೆಗೆ, ಅನುಗಮನ ವಿಧಾನ ಪೂರಕವಾದ್ದು. ಪುಸ್ತಕಗಳಿಂದ ನೇರವಾಗಿ ಕಲಿಯುವುದು ನಿಗಮನಕಲಿಕೆ. ಗಣಿತದಲ್ಲಿ ನಿಯಮಗಳು ಇರುತ್ತವೆ. ವಿದ್ಯಾರ್ಥಿ ಅವುಗಳನ್ನು ಪ್ರತ್ಯೇಕ ಸಂದರ್ಭಕ್ಕೆ ಅನ್ವಯಿಸಬೇಕು. ಆಗ ಮಾತ್ರ ಇದು ನಿಗಮನ ಕಲಿಕೆ. ಇದು ಶಾಶ್ವತವಾದ ಕಲಿಕೆಗೆ ಪೂರಕವಲ್ಲ. ಕಲಿಯಬೇಕಾದ ಸಂಗತಿಗಳು ಒಂದಕ್ಕೊಂದು ತಾರ್ಕಿಕಸರಣಿಯಿಂದ ಸಂಬಂಧಿಸಿಲ್ಲದಿದ್ದರೆ ಸ್ವತಂತ್ರ ತರ್ಕಫಲಕಾರಿಯಲ್ಲದಿದ್ದರೆ ನಿಗಮನ ವಿಧಾನವನ್ನು ಅನುಸರಿಸಲೇಬೇಕು. ಇತಿಹಾಸದ ಸತ್ಯಾಂಶಗಳು, ರಾಜಕೀಯ ಹಾಗೂ ಭೂಗೋಳಾಂಶಗಳು, ನಿಷ್ಕøಷ್ಟವಾಗಿ ರಚಿತವಾಗಿರುವ ಶೀಘ್ರಲಿಪಿ ನಿಯಮಗಳು ಮತ್ತು ಗಣಿತ ಪ್ರಮೇಯಗಳು ಈ ಗುಂಪಿಗೆ ಸೇರುತ್ತವೆ. ವಾಣಿಜ್ಯ, ಯಂತ್ರವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ನಿಗಮನ ವಿಧಾನ ಅನಿವಾರ್ಯವಾಗುತ್ತದೆ. ಉನ್ನತ ಶಿಕ್ಷಣ ಮೌಲ್ಯಗಳ ಬೆಳವಣಿಗೆಯಲ್ಲಿ ನಿಗಮನದ ಪ್ರಭಾವಕ್ಕೆ ಮಿತಿಯಿರುವುದರಿಂದ ಅದೊಂದನ್ನೇ ಯಾವಾಗಲೂ ಅನುಸರಿಸುವುದು ಸೂಕ್ತವಲ್ಲ.

	ಅನುಗಮನ ಪದ್ಧತಿಯ ಬೋಧನ ಕ್ರಮ, ವಿದ್ಯಾರ್ಥಿಗಳನ್ನು ಪರಿಚಿತ ಅಂಶಗಳ ಮೂಲಕ, ಅವುಗಳ ಅಂತರಾಳದಲ್ಲಿ ಅಡಗಿರುವ ತತ್ತ್ವನಿಯಮಗಳನ್ನು ದರ್ಶಿಸಲು ನೆರವಾಗುವುದರಿಂದ ಆ ಪದ್ಧತಿ ಕೆಳಗಿನ ಹಂತದ ಶಿಕ್ಷಣಸಂಸ್ಥೆಗಳಲ್ಲಿ ಒಳ್ಳೆಯ ಬೋಧನ ವಿಧಾನವೆನಿಸಿದೆ. ಇದರಿಂದ ವಿದ್ಯಾರ್ಥಿಗಳು ಜಟಿಲವಾದ ತತ್ತ್ವನಿಯಮಗಳನ್ನು ಸುಲಭವಾಗಿ ಗ್ರಹಿಸುವರು. ನಿಗಮನ ವಿಧಾನ ಉನ್ನತಮಟ್ಟದ ಶಿಕ್ಷಣದಲ್ಲಿ ಉಪಯುಕ್ತವೆನಿಸಿದರೂ ಕೆಳಗಿನ ಹಂತದ ಶಿಕ್ಷಣದಲ್ಲಿ ಅಷ್ಟು ಉಪಯುಕ್ತವಲ್ಲ. ಏಕೆಂದರೆ ವಿದ್ಯಾರ್ಥಿಗಳು ಆಗಲೆ ಸಿದ್ಧವಾದ ತತ್ತ್ವನಿಯಮಗಳ ಸಹಾಯದಿಂದ ವಿಶಿಷ್ಟ ಅಂಶಗಳನ್ನು ವಿವರಿಸಲು ಹೊರಟಾಗ ಈ ಪದ್ಧತಿ ಅಷ್ಟಾಗಿ ಮಾರ್ಗದರ್ಶನ ನೀಡಲಾರದು. ಆದ್ದರಿಂದಲೇ ಪ್ರೌಢಹಂತದಲ್ಲಿ ಈ ಪದ್ಧತಿಯನ್ನು ಹೆಚ್ಚು ಹೆಚ್ಚಾಗಿ ಬಳಸುವುದುಂಟು.
(ಬಿ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ